Sunday 8 May 2016

WIKIPEDIA..........

ಅವಕಾಶಗಳಿಗೆ ಬರವೇ? ಅವಕಾಶಗಳನ್ನು ಹುಡುಕಿಕೊಂಡು ಹೋಗದೆ, ಅವಕಾಶಗಳೇ ನನ್ನ ಹತ್ತಿರ ಬರಲಿ ಎಂದು ಕುಳಿತ್ತಿದ್ದೆ.
ನನ್ನ ಗೆಳತಿ ಹೇಳಿದಳು ಕಾಲೇಜಿನಲ್ಲಿ ಕಾರ್ಯಗಾರ ಏರ್ಪಡಿಸಿದ್ದಾರೆ ನಾವು ಸಹಾ ಭಾಗವಹಿಸೋಣವೆಂದಳು. ಅರ್ಧ ಮನ್ನಸ್ಸಿನಿಂದ ಸರಿ ಎಂದು ಹೇಳಿದೆ. ಕಾಲೇಜಿನಲ್ಲಿ ಮೊದಲ ಬಾರಿ ಭಾಗವಹಿಸಿದ ಕಾರ್ಯಗಾರ, ಅದು ಸಹ ನನ್ನ ಮೆಚ್ಚಿನ ಭಾಷೆ ಕನ್ನಡದಲ್ಲಿ ಎಂದು ಮಾತ್ರ ಗೊತ್ತಿತ್ತು. ಕಾರ್ಯಗಾರದ ವಿಷಯವೇನೆಂದು ಕೇಳಿದೆ. WIKIPEDIA ಎಂದಳು.

WIKIPEDIA ಏನಿದು? ಏತಕ್ಕೆ? ಉಪಯೋಗ? ನನ್ನ ಉತ್ತರ ಗೊತ್ತಿಲ್ಲ. ಎಲ್ಲಿಯೋ ಕೇಳಿದ ಹಾಗೆ ಇದೆಯಲ್ಲ ಅನ್ನಿಸಿತು. ನಂತರ ಗೊತ್ತಾಯಿತು ಮೊನ್ನೆ GOOGLEನಲ್ಲಿ ಯಾವುದೋ ಒಂದು ವಿಷಯ ಹುಡುಕುವಾಗ ಈ ವಿಷಯ ವಿಕಿಪೀಡಿಯದಲ್ಲಿದೆ ಎಂದು ತೋರಿಸಿತು. ನಾನು ತಲೆ ಕೆಡಿಸಿಕೊಳ್ಳಲ್ಲಿಲ್ಲ. ಒಟ್ಟಿನಲ್ಲಿ ವಿಷಯ ಸಿಕ್ಕಿದರೆ ಸಾಕಲ್ಲ ಎಂಬುದು ನನ್ನ ಭಾವನೆಯಾಗಿತ್ತು.

ಅಂದು ಕೊಂಡಿದ್ದೆ ಯಾರೋ ಬರುತ್ತಾರೆ....... ಸುಮ್ಮನೆ ಮಾತನಾಡುತ್ತಾರೆ.....ಅವರಿಗೆ ತಿಳಿದಿರುವುದನ್ನು ಮಾತ್ರ ಹೇಳ್ತಾರೆ........... ಹಾಗೆ ಮಾಡಿ...... ಹೀಗೆ ಮಾಡಿ ಎನ್ನುತ್ತಾರೆ..... ಕೊನೆಯಲ್ಲಿ ಕಾರ್ಯಕ್ರಮ ಮುಗಿಯಿತು ಅಷ್ಟೇ.

ಆದರೆ ನನ್ನ ಊಹೆ ಸುಳ್ಳಾಯಿತು. WIKIPEDIA ಕಾರ್ಯಗಾರವು ನನ್ನ ಊಹೆಗಿಂತ ಜಾಸ್ತಿ ವಿಷಯಗಳನ್ನು ತಿಳಿಸಿಕೊಟ್ಟಿದೆ.  ಹಂತ ಹಂತವಾಗಿ ಕಲಿಯಲಾರಂಭಿಸಿದೆ. ಮೊದಲ ಕಾರ್ಯಗಾರವು 3 ದಿನಗಳದ್ದಾಗಿತ್ತು. ವಿಷಯ ’ಕರಾವಳಿಯ ಮಹತ್ವದ ಲೇಖಕಿಯರು’. ನಾನು ಸೃಷ್ಟಿಸಿದ ಮೊದಲ ಲೇಖನ ಮಿತ್ರವಿಂದಾ ಕುಲಕರ್ಣಿಯವರ ಬಗ್ಗೆ.  ಮೊದಲನೆಯದಾಗಿ ವಿಷಯಗಳನ್ನು ಸಂಗ್ರಹಿಸುವುದು ಹೇಗೆ ಎಂದು ಅರಿತೆ. ಸಂಗ್ರಹವಾದ ಮಾಹಿತಿಯನ್ನು ಜೋಡಿಸುವುದನ್ನು ಕಲಿತೆ. ತರ್ಕಬದ್ಧವಾಗಿ ಆಲೋಚಿಸಲು ಕಲಿತೆ. ನಂತರ ಅದನ್ನು ಉಪಯುಕ್ತ ಲೇಖನವನ್ನಾಗಿ ಮಾಡಲು ಕಲಿತೆ. ಲೇಖನವೇನೋ ಆಯಿತು. ಆದರೆ ಇದನ್ನು ಏನು ಮಾಡಲಿ? ನಾನೊಬ್ಬಳೇ ಕಲಿತರೆ ಸಾಕೇ? ಬೇರೆಯವರಿಗೆ ತಿಳಿಸಬೇಕಲ್ಲವೇ? ನಂತರ ವಿಕಿಪೀಡಿಯದಲ್ಲಿ ಆ ಮಾಹಿತಿಯನ್ನು ಸೃಷ್ಟಿಸಿದೆ. ಏನೋ ಸಾಧಿಸಿದೆ ಎಂದು ಖುಷಿಯಾಯಿತು. ಹೀಗೆಯೆ ಒಂದರ ನಂತರ ಒಂದು ಲೇಖನಗಳನ್ನು ಹಾಕಲಾರಂಭಿಸಿದೆ. ಈ ಕೆಲಸವು ನನಗೆ ಖುಷಿಕೊಟ್ಟಿತು. Editing counts ಜಾಸ್ತಿ ಆದಷ್ಟು ಇನ್ನೂ ಖುಷಿ.

ಎಷ್ಟೋ ಬಾರಿ ವಿಷಯಗಳನ್ನು ಹುಡುಕುವಾಗ ಇಂಗ್ಲೀಷ್ ನಲ್ಲಿ ಮಾತ್ರ ಸಿಗುತ್ತಿತ್ತು. ಕನ್ನಡದಲ್ಲಿ ಸಿಗುತ್ತಿರಲಿಲ್ಲ. ಬೇಕಾದ ವಿಷಯ ಸಿಗಲಿಲ್ಲ ಎಂದು ಚಿಂತೆ ಮಾಡದೆ ಬೇಕಾಗುವ ವಿಷಯಗಳನ್ನು ವಿಕಿಪೀಡಿಯದಲ್ಲಿ ಸೇರಿಸುವುದರಿಂದ ಉಪಯೋಗವಾಗುತ್ತದೆ ಅಂದುಕೊಂಡೆ. ಸಮಯ ಸಿಕ್ಕಾಗಲೆಲ್ಲಾ ಲೇಖನಗಳನ್ನು ಸರಿಪಡಿಸುತ್ತಿದ್ದೆ, ತಿಳಿದ ಮಾಹಿತಿಯನ್ನು ಸೇರಿಸುತ್ತಿದ್ದೆ. ಬಿಡುವಿನ ಸಮಯವನ್ನು ಹೀಗೆ ವಿಕಿಪೀಡಿಯದಲ್ಲಿ ಕಳೆಯಲಾರಂಭಿಸಿದೆ.

ಇಷ್ಟಕ್ಕೇ ನಿಲ್ಲಲಿಲ್ಲ. ನಾವು ಮಾಡುವ ಕೆಲಸವನ್ನು ಮೆಚ್ಚಿ ಮತ್ತೊಮ್ಮೆ ಸಂಪಾದನೋತ್ಸವವನ್ನು ಏರ್ಪಡಿಸಿದರು. ಈ ಬಾರಿ ಮಾತ್ರ ನಾನಾಗಿಯೇ ಪೂರ್ತಿ ಮನ್ನಸ್ಸಿನಿಂದ ಭಾಗವಹಿಸಿದೆ. ಒಂದು ವಾರದ ಮೊದಲೇ ವಿಷಯವನ್ನು ತಿಳಿಸಿ ಮಾಹಿತಿ ಸಂಗ್ರಹಿಸಲು ಹೇಳಿದರು. ಇದರ ವಿಷಯ ’ಔಷಧೀಯ ಸಸ್ಯಗಳು ಹಾಗು ಉಪಯೋಗಗಳು’. ಅಯ್ಯೋ ಏನಿದು ನಾನು ಓದ್ತಾ ಇರೋದು B. Com ಇವರು ನೋಡಿದ್ರೆ Botany topic ಕೊಟ್ಟಿದಾರಲ್ಲ ನಮ್ಗೆ ಏನ್ ಅರ್ಥ ಆಗುತ್ತೆ ಅಂದುಕೊಂಡೆ. ಮೊದಲೇ ನಾನು ಪುಸ್ತಕಗಳನ್ನು ಓದುವುದು ಕಡಿಮೆ, Library ಮುಖ ನೋಡುತ್ತಿದ್ದದ್ದೇ aassignments ಕೊಟ್ಟಾಗ ಮಾತ್ರ. ಆದ್ರೂ ನೋಡೋಣ ಏನು ವಿಷಯ ಸಿಗುತ್ತದೆ ಎಂದು ಕಾಲೇಜ್ Libraryಗೆ ಹೋದೆ. ನನ್ನ ಸಹಾಯಕ್ಕೆ ಬಂದವರು ಕವಿತ ಮೇಡಮ್. ಹುಡುಕಿದಷ್ಟು ಹೆಚ್ಚು ಪುಸ್ತಕಗಳು ಸಿಕ್ಕಿದವು, ಹೆಚ್ಚು ಹೆಚ್ಚು ಮಾಹಿತಿಯನ್ನು ಒಳಗೊಂಡಿದ್ದವು. ಇದರಿಂದಾಗಿ ಪುಸ್ತಕಗಳ ಮಹತ್ವ ತಿಳಿದುಕೊಂಡೆ. ಪುಸ್ತಕ ಓದಬೇಕೆಂಬ ಮನೋಭಾವ ನನ್ನಲ್ಲಿಯೂ ಬಂತು. ಪುಸ್ತಕಗಳಷ್ಟೇ ಅಲ್ಲದೇ Internetನಿಂದ ಸಹಾ ವಿಷಯಗಳನ್ನು ಹುಡುಕಾಡಿದೆ.

ಅಂತೂ ಸಂಪಾದನೋತ್ಸವದ ದಿನ ಬಂತು. ಸಂಗ್ರಹಿಸಿದ ವಿಷಯಗಳನ್ನು ಲೇಖನಗಳನ್ನಾಗಿ ಮಾಡಿ WIKIPEDIAದಲ್ಲಿ ಹಾಕಿದೆವು. ಆ ದಿನ ಸಂಪಾದಿಸಿದ ಮೊದಲ ಲೇಖನ ಬಜೆ.  ಇದರಿಂದ ಇನ್ನಷ್ಟು ಖುಷಿಯಾಯಿತು. ನಾನು ಮಾಡಿದ ಕೆಲಸಗಳನ್ನು ನೋಡಿ ನನಗೇ ಆಶ್ಚರ್ಯವಾಯಿತು. ಇಷ್ಟೋ ಗಿಡ ಮರಗಳನ್ನು ನನ್ನ ಸುತ್ತಮುತ್ತಲೂ ನೋಡಿದ್ದೆ. ಆದರೆ ಅದರಲ್ಲಿಯೂ ಸಹಾ ಔಷಧೀಯ ಗುಣಗಳಿರುತ್ತದೆ ಎಂದು ತಿಳಿದದ್ದೇ ಆವಾಗ. ಹೀಗೆ ನಾನು ಲೇಖನಗಳನ್ನು ಹಾಕುವುದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನಗೆ ತಿಳಿಯದ ಎಷ್ಟೋ ವಿಷಯಗಳನ್ನು ತಿಳಿದುಕೊಂಡೆ.

ಒಂದು ವಿಷಯ ಸಿಕ್ಕಿತ್ತೆಂದರೆ ಅದನ್ನು ನೇರವಾಗಿ ಹಾಕಬಾರದು. ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ಸಂಗ್ರಹಿಸಬೇಕು. ಸಿಕ್ಕ ವಿಷಯ ನಿಜವೇ ಎಂದು ನೋಡಬೇಕು. ವಿಷಯ ಮೊದಲೇ ಇದ್ದರೇ ಅದಕ್ಕೆ ಇನ್ನಷ್ಟು ಸೇರಿಸಬಹುದು. ಇಲ್ಲದಿದ್ದರೆ ಹೊಸ ಲೇಖನವನ್ನು ಸೃಷ್ಟಿಸಬಹುದು. ವಿಷಯಗಳು ಹಲವಾರು ಕಡೆಗಳಿಂದ ಸಿಗಬಹುದು. ಅದು ಎಲ್ಲಿ ಸಿಕಿತ್ತೆಂಬುದನ್ನು ಸಹಾ ಬರೆಯಬೇಕು. ಆಗ ಆ ವಿಷಯದ ಬಗ್ಗೆ ಸಂಶೋಧನೆ ಮಾಡುವವರಿಗೆ ಉಪಯೋಗವಾಗುತ್ತದೆ.

ವಿಜ್ನಾನದ ಬಗ್ಗೆ ಕಲಿಯುವುದೆಂದರೆ ಬಹಳ ಇಷ್ಟ. BOTANY ವಿಭಾಗದ ಬಗ್ಗೆ ಏನೋ ತಿಳಿದುಕೊಂಡೆ. ಮುಂದೆ ಏನು ಹುಡುಕಲಿ ಎಂದು ಆಲೋಚಿಸುತ್ತಿದ್ದೆ. ನಂತರ ಶಿವರಾಮ ಕಾರಂತರ ’ಬಾಲಪ್ರಪಂಚ’ ಎಂಬ ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿ ಕ್ಲೋರಿನ್ ಎಂಬುದರ ಬಗ್ಗೆ ಇತ್ತು. ಇದರ ಬಗ್ಗೆ ಇನ್ನಷ್ಟು ಹುಡುಕಿದೆ. ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ನನಗೆ ಮತ್ತಷ್ಟು ವಿಷಯ ಸಿಕ್ಕಿತು, ಇದಲ್ಲದೇ ಇಂಗ್ಲೀಷ್ ವಿಕಿಪೀಡಿಯದಲ್ಲಿಯೂ ಹುಡುಕಿ ವಿಷಯ ಸಂಗ್ರಹಿಸಿದೆ. ಎಷ್ಟೋ ಪದಗಳ ಅರ್ಥವೇ ತಿಳಿದಿರಲಿಲ್ಲ. ಇಅದನ್ನು ತಿಳಿಯಲು ಐದಕ್ಕಿಂತ ಹೆಚ್ಚು ಪುಸ್ತಕಗಳನ್ನು ಹುಡುಕಿದ್ದೇನೆ. ಓ ವಿಜ್ನಾನದಲ್ಲಿ ಇಷ್ಟೆಲ್ಲಾ ಇದೆಯೇ ಎನ್ನಿಸಿತು. ಅಂತೂ ನನ್ನ ಕ್ಲೋರಿನ್ ಲೇಖನವು ಒಂದು ವಾರದಲ್ಲಿ ಜೀವ ಪಡೆದುಕೊಂಡಿತು.

ಅಬ್ಬಾ...... ಎಷ್ಟೆಲ್ಲಾ ವಿಷಯಗಳನ್ನು ತಿಳಿದುಕೊಂಡೆ. ಆದರೆ ಇದು ಕೇವಲ 30% ಅಷ್ಟೇ. ತಿಳಿಯಬೇಕಾಗಿರುವುದು ಹಲವಾರಿದೆ. ಹಂತ ಹಂತವಾಗಿ ಕಲಿಯುತ್ತಾ ಹೋಗಬೇಕಷ್ಟೆ. ಇಲ್ಲಿಯವರೆಗೆ ನಾನು 400ಕ್ಕೂ ಹೆಚ್ಚು ಲೇಖನಗಳನ್ನು ಸರಿಪಡಿಸಿದ್ದೇನೆ. ಇಷ್ಟಕ್ಕೇ ನಿಲ್ಲಿಸದೇ ನನ್ನ ಕೆಲಸವನ್ನು ಮುಂದುವರಿಸಲೇಬೇಕು ಎಂದುಕೊಂಡಿದ್ದೇನೆ.

ಇಷ್ಟೆಲ್ಲಾ ತಿಳಿದುಕೊಂಡೆ ನಿಜ...... ಆದರೇ ಇದರ ಹಿಂದೆ ಯಾರಾದರು ಸಹಾಯಕ್ಕಿದ್ದರೆ ತಾನೇ ಇಷ್ಟೆಲ್ಲಾ ಸಾಧ್ಯವಾದದ್ದು. ಹೌದು ಕಾಲೇಜಿನ ಸಹಾಯ ಇದ್ದೇ ಇದೆ. ಹೆಚ್ಚಾಗಿ ಇದೆಲ್ಲದರ ಬಗ್ಗೆ ಹೇಳಿಕೊಟ್ಟವರು ಬೇಕಲ್ಲವೇ? ಅವರೇ Dr. ಪವನಜರವರು. ವಿಕಿಪೀಡಿಯದಿಂದ ಇಷ್ಟೊಂದು ಉಪಯೋಗವಿದೆ ಎಂದು ತಿಳಿಸಿಕೊಟ್ಟವರು. ಇದು ಸರಿಯೇ ಅದು ಸರಿಯೇ ಎಂದು ನಾನು ಎಷ್ಟು ಸಲ ಕೇಳಿದರೂ ಸಹಾ ಬೇಸರ ಪಡದೆ ಹೇಳಿಕೊಟ್ಟರು. ಎಷ್ಟೋ ವಿಷಯಗಳು ನನ್ನ ಗಮನಕ್ಕೇ ಬಂದಿರಲಿಲ್ಲ. ಈ ರೀತಿಯ ವಿಷಯಗಳು ಸಹಾ ಇವೆ ಎಂದು ಮನದಟ್ಟುಮಾಡಿದರು. ಈ ನನ್ನ ಯಶಸ್ಸಿಗೆ ಕಾರಣರಾದರು.

ನನಗೆ ಸಂತೋಷ ಕೊಟ್ಟ ಕೆಲಸವಿದು. ಸಂಶೋಧನಾತ್ಮಕ ಹಾಗೂ ತರ್ಕಬದ್ಧ ಚಿಂತನೆ ನನ್ನಲ್ಲಿಯೂ ಬಂತು. WIKIPEDIAದ ಉಪಯೋಗಗಳು ಹಲವಾರಿದೆ. ಇದನ್ನು ಹೇಳಿದರೆ ಮಾತ್ರ ಸಾಲದು. ಇದರ ಅನುಭವ ಪಡೆದವರಿಗೆ ಮಾತ್ರ ತಿಳಿಯುತ್ತದೆ. ಇದು ನನಗೆ ಸಿಕ್ಕ ಒಳ್ಳೆಯ ಅವಕಾಶ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಾ ಮುಂದೆ ಸಾಗಬೇಕೆಂಬುದೇ ನನ್ನ ಆಶಯ.