Sunday 5 February 2017

ಚಂಡೀಗಢಕ್ಕೆ ಮೊದಲ ಪಯಣ.........

   ಮೂರು ದಿನಗಳ ವಿಕಿ ಕಾನ್ಫೆರೆನ್ಸ್ ೨೦೧೬ ಚಂಡಿಗಢದಲ್ಲಿ ಜರುಗಲಿದ್ದ ಕಾರಣ ಅಲ್ಲಿಗೆ ತೆರಳಬೇಕಾಗಿತ್ತು. ನನ್ನ ಪ್ರಯಾಣ ಮಂಗಳೂರಿನಿಂದ ರಾತ್ರಿ ೧೦.೩೦ಕ್ಕೆ ಆರಂಭವಾಯಿತು. ಬಸ್ಸಿನಲ್ಲಿ ಕುಳಿತಾಕ್ಷಣದಿಂದಲೇ ಚಂಡಿಗಢದ ಕಲ್ಪನೆ ಮಾಡಿಕೊಳ್ಳಲು ಯತ್ನಿಸಿದೆ. ಆದರೆ ಇದು ಚಂಡಿಗಢಕ್ಕೆ ಹೊರಟ ಮೊದಲ ಪ್ರಯಾಣವಾದ್ದರಿಂದ ಸಂಪೂರ್ಣ ಚಿತ್ರಣ ಸಿಗಲಿಲ್ಲ. ಆದರೂ ನನ್ನದೇ ಆದ ಕಲ್ಪನೆಯನ್ನು ಮಾಡಿಕೊಳ್ಳುತ್ತಿದ್ದಂತೆಯೇ ನಿದ್ರಾದೇವಿ ನನ್ನನ್ನು ಆವರಿಸಿ ಬಿಟ್ಟಿದ್ದಳು. ಬೆಳಗಿನ ೪.೩೦ ಅಷ್ಟರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ. ಆದರೂ ಸಹಾ ನಿದ್ರೆಯಲ್ಲಿಯೇ ತೇಲಾಡುತ್ತಿದ್ದೆ. ಚಂಡಿಗಢಕ್ಕೆ ಹೋಗುವ ವಿಮಾನ ೧೦ ಗಂಟೆಗೆ ಹೊರಡಲಿತ್ತು. ಆಚೆ ಈಚೆ ನೋಡಿ, ತಿಂಡಿ ತಿಂದು, ಬೋರ್ಡಿಂಗ್ ಪಾಸ್ ಪಡೆದು ಹೋಗುವಷ್ಟರಲ್ಲಿ ಸಮಯವಾಗಿತ್ತು.

   ನಾನು ಅದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದದ್ದು, ಕಾತುರದಿಂದ ಕಾಯುತ್ತಿದ್ದೆ. ಅಂತೂ ಇಂಡಿಗೊ 6E ಗೆ ಹೊರಡಲು ಎಲ್ಲರಂತೆ ಸಾಲಿನಲ್ಲಿ ನಿಂತೆ. ವಿಮಾನದ ಬಳಿ ದಾವಿಸಿದಂತೆ ಮೊದಲು ಕಂಡಿದ್ದು ಗಗನಸಖಿಯರು, ತನ್ನ ಸಂಬಂಧಿಕರೇ ಬಂದರೋ ಎನ್ನುವ ಹಾಗೆ ನಮ್ಮನ್ನು ಆಧರದಿಂದ ಸ್ವಾಗತಿಸಿದರು. ಅವರನ್ನು ನೋಡುತ್ತಾ ಮುಗುಳ್ನಗುವಿನ್ನೊಂದಿಗೆ ವಿಮಾನಕ್ಕೆ ಬಲಗಾಲಿಟ್ಟು ಹೋದೆ. ವಿಮಾನ ಹೊರಡುವ ಸಮಯವಾಯಿತು ಎಂದು ಸಖಿಯರು ಸಲಹೆಗಳನ್ನು ಕೊಡುವುದರ ಮೂಲಕ ತಿಳಿಸಿದರು. ಭಯ, ಕುತೂಹಲ, ಹುಮ್ಮಸ್ಸು, ಉತ್ಸಾಹ, ಮತ್ತಿತರ ಭಾವನೆಗಳೆಲ್ಲಾ ಒಮ್ಮೆಗೆ ಬಂದಂತಿತ್ತು.

   ಅಂತೂ ಮಧ್ಯಾಹ್ನ ೧ ಗಂಟೆ ಅಷ್ಟರಲ್ಲಿ ಚಂಡಿಗಢಕ್ಕೆ ತಲುಪಿದೆವು. ಹೊಸ ಜಾಗ, ಹೊಸ ಜನ, ಹೊಸ ಭಾಷೆ. ಹೊರಗೆ ಕಾಲಿಡುತ್ತಿದಂತೆಯೇ ಮೈಮೇಲೆ ಬೆಂಕಿ ಹಾಕಿದಷ್ಟು ಸೆಕೆಯೋ ಸೆಕೆ. ಅರ್ಧಂಬರ್ಧ ನಿದ್ದೆಯಲ್ಲಿದ್ದುದರಿಂದ ಆಚೆ ಈಚೆ ಏನಿದೆ ಎಂದು ನೋಡಲು ಮನಸಾಗಲಿಲ್ಲ.

   ಇಷ್ಟೆಲ್ಲ ಹೇಳಿ ನಾನು ಚಂಡಿಗಢಕ್ಕೆ ಯಾಕೆ ಹೋಗಿದ್ದು ಎಂದು ಹೇಳಿಯೇ ಇಲ್ಲವಲ್ಲ? ಚಂಡಿಗಢದಲ್ಲಿ ವಿಕಿ ಕಾನ್ಫೆರೆನ್ಸ್ ಇಂಡಿಯ ೨೦೧೬ ಎಂಬ ಕಾರ್ಯಕ್ರಮವಿತ್ತು. ೨೦೧೧ರ ನಂತರ ಇಂತಹ ಕಾನ್ಫೆರೆನ್ಸ್ ನಡೆದದ್ದು. ನನಗೆ ಈ ಕಾನ್ಫೆರೆನ್ಸ್ನಲ್ಲಿ ಭಾಗವಹಿಸಲು ಸ್ಕಾಲರ್ಶಿಪ್ ದೊರೆತಿತ್ತು. ಆ ಸಮ್ಮೇಳನದಲ್ಲಿ ನಾನು ನಮ್ಮ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡು ನಡೆಸಿದ ಎರಡು ಕನ್ನಡ ವಿಕಿಪೀಡಿಯ ಸಂಪಾದನೋತ್ಸವಗಳ ಬಗ್ಗೆ ಒಂದು ಚಿಕ್ಕ ಪೇಪರ್ ಪ್ರೆಸೆಂಟ್ ಮಾಡಿದ್ದೆ https://commons.wikimedia.org/wiki/File:Efforts_to_bridge_Gender_gap_in_Kannada_Wikipedia-_our_work_at_Mangaluru.pdf. ಅದರ ಬಗ್ಗೆ ಪ್ರತ್ಯೇಕ ಬ್ಲಾಗ್ ಬರೆಯಬೇಕೆಂದುಕೊಂಡಿದ್ದೇನೆ. ಅದಕ್ಕೆ ಯಾವಾಗ ಮೂಡ್ ಮತ್ತು ಸಮಯ ದೊರೆಯುತ್ತದೋ ಗೊತ್ತಿಲ್ಲ.

   ಮೂರು ದಿನಗಳ ಕಾಲ ಕಾನ್ಫೆರೆನ್ಸ್ ಇದ್ದ ಸ್ಥಳ ಚಂಡಿಗರ್ ಗ್ರೂಪ್ ಆಫ್ ಕಾಲೇಜಿನ ಹಾಸ್ಟೆಲ್ಲಿನಲ್ಲಿದ್ದೆ. ಕಾನ್ಫೆರೆನ್ಸ್ ನ ಜೊತೆ ಅಲ್ಲಿಯ ಜನರ ಚಲನ ವಲನಗಳನ್ನು ಗುರುತಿಸುತ್ತಿದ್ದೆ ಹಾಗು ಅವರ ಹವ್ಯಾಸಗಳ ಬಗ್ಗೆ ತಿಳಿದುಕೊಂಡೆ. ಅವರಿಗಿದ್ದ ಆಸಕ್ತಿ ಹುಮ್ಮಸ್ಸು ಹೇಳತೀರದು.
ಅಂದು ಭಾನುವಾರ ಎಲ್ಲರು ಸುಕುನ ಲೇಕ್ ಗೆ ಹೋಗುವುದಾಗಿ ಹೊರೆಟೆವು. ಬಸ್ಸಿನಲ್ಲಿ ಹೋಗುವಾಗಲೇ ಸುತ್ತಮುತ್ತಲಿನ ವಾತವರಣವನ್ನು ಸವಿಯುತ್ತಿದ್ದೆ. ಆ ಸಂಜೆಯಲ್ಲಿ ಜನ ಜಂಗುಳಿಯೇ ನೆರೆದಿತ್ತು. ಅಲ್ಲಿ ಹೋದ ತಕ್ಷಣ ಮಾಡಿದ್ದೇ, ಚಹಾ ಸವಿಯುವ ಕೆಲಸ. ಹಾಗೆಯೇ ಸರೋವರವನ್ನು ನೋಡುತ್ತಿದ್ದಂತೆಯೇ ನಮ್ಮ ಮೈಸೂರಿನ ಕೆ. ಆರ್. ಸ್. ನೆನಪಿಗೆ ಬಂತು. ಇಲ್ಲವನ್ನು ಮುಗಿಸಿ ಮತ್ತೆ ಹಿಂದಿರುಗಿದೆವು.

   ರಾಕ್ ಗಾರ್ಡನ್ ಚಂಡೀಗಢದಲ್ಲಿ ನೋಡಲೇ ಬೇಕಾದ ಸ್ಥಳ ಎಂದು ಹಲವರು ಹೇಳುತ್ತಿದ್ದರು. ಓಹೋ, ಏನಿರಬಹುದು ಬರೀ ಕಲ್ಲಿನ ಕೆತ್ತನೆಯೇ ಅಥವಾ ಬೇರೆಯೇ ಎಂದು ಹೇಳುವಷ್ಟರಲ್ಲಿ ಕೊನೆಯ ದಿನ ಸೋಮವಾರ ಬೆಳಗ್ಗೆ ರಾಕ್ ಗಾರ್ಡನ್ ಗೆ ಹೋಗುವುದೆಂದು ತೀರ್ಮಾನಿಸಲಾಗಿತ್ತು. ೧೦. ೩೦ ಕ್ಕೆ ಸರಿಯಾಗಿ ಜಿರಕ್ ಪುರ್ ನಿಂದ ಹೊರೆಟೆವು. ಚಂಡೀಗಢದ ರಸ್ತೆಗಳು ನಿಜಕ್ಕೂ ಸ್ವಚ್ಚವಾಗಿ ತೋರುತ್ತಿದ್ದವು. ನಮ್ಮ ಬೆಂಗಳೂರಿಗೆ ಹೋಲಿಸಿದರೆ, ವಾಹನಗಳ ಸಂಚಾರ ಹಾಗು ಟ್ರಾಫಿಕ್ ಬಹಳ ಕಡಿಮೆಯಿತ್ತು. ದಾರಿಯುದ್ದಕ್ಕೂ ಮರ- ಗಿಡಗಳನ್ನು ನೋಡಲು ಸಂತೋಷವಾಗುತ್ತಿತ್ತು. ಸುತ್ತಾ ಹಸಿರು ಕಂಗೊಳಿಸುವುದರ ಮಧ್ಯದಲ್ಲಿ ರಸ್ತೆ, ರಸ್ತೆಯಲ್ಲಿ ಕಾರು, ಕಾರಿನಲ್ಲಿ ನಾವು, ಆ ಪರಿಸರವನ್ನು ಸವಿಯುವುದರ ಖುಷಿಯೇ ಬೇರೆಯೇಬಿಡಿ. ಅಂತೂ ೧೧ ಗಂಟೆಗೆ ತಲುಪಿದೆವು. ಕಾರಿನಿಂದ ಇಳಿದಾಕ್ಷಣ ಒಮ್ಮೆ ಸುತ್ತಲೂ ನೋಡಿದೆ, ಮರ- ಗಿಡಗಳೇ ತುಂಬಿದ್ದವು. ರಾಕ್ ಗಾರ್ಡನ್ ನೋಡುವ ಕುತೂಹಲ ಹೆಚ್ಚಾಯಿತು. ಪ್ರವೇಶ ದ್ವಾರಕ್ಕೆ ತಲುಪಿದಂತೆ ನನ್ನ ಕುತೂಹಲ ಗಗನಕ್ಕೇರಿತ್ತು.

   ಹೊರಗಿನಿಂದ ನೋಡಿದರೆ ಏನೋ ಗುಹೆಯ ರೀತಿ ತೋರುತ್ತಿತ್ತು. ಚಿಕ್ಕ ದ್ವಾರ, ಒಳಗೆ ದೊಡ್ಡ ಪ್ರದೇಶ, ತಲೆಬಾಗಿ ನಡೆದೆವು. ಬೇಲೂರಿನ ಕೆತ್ತನೆಯನ್ನೇ ತಲೆಯಲ್ಲಿಟ್ಟು ಕೊಂಡು ಹೋಗಿದ್ದ ನನಗೆ ಕಲ್ಲುಗಳನ್ನು ಅಂಟಿಸಿಟ್ಟಿರುವುದ್ದನ್ನು ನೋಡಿ ವಿಚಿತ್ರವೆನಿಸಿತು. ಎಷ್ಟೋ ಕಲ್ಲುಗಳನ್ನು ಅಂಟಿಸಿ ಒಂದು ಆಕಾರ ನೀಡಿದ್ದರು. ಇಂತಹ ಕಲ್ಲುಗಳಲ್ಲಿ ನೋಡುವುದೇನಿದೆ ಇದರಲ್ಲೇನು ವಿಷೇಶತೆ ಎಂದು ಆಲೋಚಿಸುತ್ತಾ ಕುಳಿತು ಬಿಟ್ಟೆ. ಆದರೂ ಮುಂದೆ ಏನಿದೆ ಎಂದು ತಿಳಿಯುವ ಕುತೂಹಲದೊಂದಿಗೆ ಮುನ್ನಡೆದೆ. ಮುಂದೆ ಹೋದಂತೆ ಚಿಕ್ಕ ಚಿಕ್ಕ ಗುಹೆಯ ಅನುಭವ. ಸುತ್ತಲೂ ಒಂದಕ್ಕೊಂದು ಅಂಟಿಸಿದ ಕಲ್ಲಿಗಳ ಆಕಾರಗಳೇ, ಮಧ್ಯ ಮಧ್ಯದಲ್ಲಿ ಕೊಳ, ಮರ- ಗಿಡಗಳು. ಒಂದೇ ಆಕಾರವನ್ನು ನೋಡಲಾರಂಭಿಸಿದೆ ಅದರಲ್ಲಿ ಎಷ್ಟೋ ವಿಷಯಗಳು ಒಮ್ಮೆಗೆ ನೆನಪಾದವು. ಒಂದೊಂದು ಆಕಾರವು ಒಂದೊಂದು ಕಥೆಯನ್ನು ಹೇಳುತ್ತಿದ್ದವು. ಆದರೂ ನನ್ನ ಕುತೂಹಲ ಹೆಚ್ಚಾಗುತ್ತಲೇ ಇತ್ತು. ಹಲವು ನಮೂನೆಯ ಕಲ್ಲುಗಳು. ಒಂದಾಕಾರ ಇನ್ನೊಂದಾಕಾರಕ್ಕೆ ವಿಭಿನ್ನವಾಗಿತ್ತು. ಸಾಮಾನ್ಯವಾಗಿ ಒಂದೇ ಕಲ್ಲಿನಲ್ಲಿ ಕೆತ್ತನೆ ಮಾಡಿರುವುದನ್ನು ನೋಡಿದ್ದೆ. ಆದರೆ ಇಲ್ಲಿ ಕಲ್ಲುಗಳನ್ನು ಅಂಟಿಸಿಟ್ಟಿದ್ದನ್ನು ನೋಡಿ ಏನೋ ಹೊಸತನ್ನು ನೋಡಿದಂತಾಯಿತು. ಅಬ್ಬಾಬ್ಬ ಎಂದರೂ ೩೦೦ಕ್ಕೂ ಹೆಚ್ಚಿನ ಫೋಟೋಗಳನ್ನು ಸೆರೆ ಹಿಡಿದಿದ್ದೇನೆ. ಸೂರ್ಯ ತಲೆ ಮೇಲೇರಿದ್ದ, ಅಷ್ಟು ನಡೆದು ಸುಸ್ತು ಸಹಾ, ಆದರೂ ಅಲ್ಲಿಂದ ಹೊರಬರಲು ಮನ್ನಸ್ಸೇ ಬರುತ್ತಿರಲಿಲ್ಲ. ಆದರೂ ಹೊರ ನಡೆದೆವು. ಒಂದು ದಕ್ಷಿಣ ಭಾರತ ಶೈಲಿಯ ಹೋಟೆಲ್ ಇದೆ ಎಂದು ತಿಳಿದು ಊಟ ಮಾಡಲು ಹೋದೆವು. ಒಳ್ಳೆಯ ಊಟ, ಒಳ್ಳೆಯ ಉಪಚಾರ. ಎಲ್ಲವನ್ನು ಮುಗಿಸಿ ಅಂತೂ ಚಂಡೀಗಢಕ್ಕೆ ವಿದಾಯ ಹೇಳಿ ಸಂಜೆ ಬೆಂಗಳೂರು ತಲುಪಿ, ಮರುದಿನ ಬೆಳಗ್ಗೆ ಮಂಗಳೂರು ತಲುಪಿದೆ.

   ಏನೋ ಸಾಧಿಸಿದೆ ಎಂಬ ಖುಷಿ. ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡೆ. ವಿಕಿಪೀಡಿಯಕ್ಕೆ ಲೇಖನ ಹಾಕುವುದರ ಜೊತೆಗೆ ಕಲಿಯುವಂತಹದ್ದು ಬಹಳ ಇದೆ ಎನಿಸಿತು. ಹೇಳಬೇಕೆಂದರೆ ನನಗೆ ಬಹಳ ಖುಷಿ ಕೊಡುವ ಕೆಲಸ ಇದೇ. ನನ್ನ ಈ ಹೊಸ ಹೊಸ ಅನುಭವಗಳು ನಿಜವಾಗಿಯು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿವೆ.


WIKI WOMEN AT CHANDIGARH


WITH ODIA WIKIPEDIANS


No comments:

Post a Comment